ಬಾಗಲಕೋಟೆ 28: ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೇ ಎಂಬಂತೆ ಬರೆದವುಗಳು. ನಿಜ ಘಟನೆಗಳನ್ನು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ನೋಡಿ ಬರೆದ ಪ್ರಬಂಧಗಳನ್ನು ಲಘು ಪ್ರಬಂಧಗಳೆಂದು ಕರೆಯಬಹುದು.
ನಾಡಿಗೇರ ಕೃಷ್ಣರಾಯರು ಕಸ್ತೂರಿ ಎಂ ಎಸ್ ಸುಂಕಾಪುರ ಆ ರಾಮಿತ್ರ ಮೊದಲಾದವರು ಈ ಬಗೆಯ ಪ್ರಬಂಧಕ್ಕೆ ಹೆಸರಾದವರು. ಹಿಂದೆ ಇದ್ದ ಕೊರವಂಜಿ ಹಾಸ್ಯ ಪತ್ರಿಕೆ ಹಾಸ್ಯ ಪ್ರಬಂಧಕ್ಕೆ ಹೆಸರಾಗಿತ್ತು. ಎಂದು ಲಲಿತ ಪ್ರಬಂಧಕಾರರಾದ ಡಾ. ಬಸವರಾಜ ಕುಂಬಾರ ಅವರು ಅಭಿಪ್ರಾಯಪಟ್ಟರು. ಅವರು ಇಂದು ಇಲ್ಲಿನ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಕನ್ನಡ ವಿಭಾಗವು ಏರಿ್ಡಸಿದ್ದ ಲೇಖಕರ ಸಂವಾದ ಕಾರ್ಯಕ್ರಮದಲ್ಲಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯದ ಎರಡನೆಯ ಸೆಮಿಸ್ಟರ್ ಅವಶ್ಯಕ ಕನ್ನಡ ಭಾಷಾ ಪಠ್ಯದಲ್ಲಿ ಅಳವಡಿಸಿರುವ ಅವರು ರಚಿಸಿರುವ ಇದು ಗುಳಿಗೆ ಲೋಕವಯ್ಯ ಎಂಬ ಪ್ರಬಂಧವನ್ನು ಸಮೀಕರಿಸಿ ಮಾತನಾಡುತ್ತಿದ್ದರು. ಇಂದಿನ ಮಾನವ ಜೀವನದಲ್ಲಿ ಗುಳಿಗೆಗಳು ಅರ್ಥಾತ್ ಮಾತ್ರೆಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಮನುಷ್ಯನು ಗುಳಿಗೆಗಳನ್ನು ತೆಗೆದುಕೊಳ್ಳಲು ನಾನಾ ಕಾರಣಗಳಿವೆ ಸಾಮಾನ್ಯ ಕಾಯಿಲೆ ಇರಬಹುದು ಅಥವಾ ಅಸಾಮಾನ್ಯ ಕಾಯಿಲೆ ಇರಬಹುದು ಯಾವುದೇ ಕಾಯಿಲೆ ಇದ್ದರೂ ಸಹ ಗುಳಿಗೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಇಂದಿನ ಸಂದರ್ಭದಲ್ಲಿ ನಾವುಗಳು ಮಾತ್ರೆರಹಿತವಾಗಿ ಅಥವಾ ಗುಳಿಗೆ ರಹಿತವಾಗಿ ಬದುಕುವಂತಹ ಸಂದರ್ಭವನ್ನ ಸೃಷ್ಟಿ ಮಾಡಿಕೊಳ್ಳಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜು ವಹಿಸಿದ್ದರು ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ ವೀರಯ್ಯ ಚಿಕ್ಕಮಠ ಮತ್ತು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಸಜಾನಂದ ಡಿ ಕೆಂಗಲ ಗುತ್ತಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಎನ್ಬಿ ವಿರೂಪಾಕ್ಷಿಯವರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.